ಶರೀಫಾಬೀ ಹಾಗೂ ಇಳಕಲ್ ಸೀರೆ

ಈ ಸಲ ನಾನು ತರಬೇತಿ ನೀಡಲು  ಹೋದದ್ದು ಹುನಗುಂದಕ್ಕೆ. ತರಬೇತಿಗೆ ಬರಬೇಕಾದ ಹಲವಾರು ಮಹಿಳೆಯರು ಬರಲಿಲ್ಲ. ಕಾರಣ ಅದು ’ಲಗ್ನದ ಸೀಸನ್ ’. ಹೀಗಾಗಿ ಕೊನೆಗೆ ಬಂದ ಕೆಲವೇ ಕೆಲವು ಮಹಿಳೆಯರು ’ಆಫೀಸಿಗೆ’  ತಲುಪುವುದರಲ್ಲಿ ಬಹಳ ಸಮಯ ಆಗಿತ್ತು. ಹಾಗೆ ತಡವಾಗಿ ಬಂದವರಲ್ಲಿ ಶರಫಾಬೀ ನೂ ಒಬ್ಬಳು. ೫೦ರ ಆಸುಪಾಸಿನ ಶರೀಫಾ ಕಡ್ಡಿಯಂತೆ ತೆಳ್ಳಗೆ ಎತ್ತರದ ಆಳು. ಅವಳು ತಡವಾಗಿ ತರಬೇತಿಗೆ ಬಂದ ಕಾರಣ ರಾತ್ರಿಯೆಲ್ಲ ಅವಳು ಸೀರೆ ನೇಯುತ್ತಿದ್ದಳೆಂತೆ. ಅವಳ ನೀಳ ಕೈಗಳಲ್ಲಿ ತಂದಿದ್ದ ಸಣ್ಣ ಕವರ್ ಒಳಗಿಂದ ತೆಗೆದ ಆ ಸೀರೆ, ಆಗಷ್ಟೆ ಮಾಡಿದ ಬಿಸಿ  ಸಾರಿನಂತೆ  ಘಮಘಮಿಸುತಿತ್ತು.  ಹಸಿರು ಬಣ್ಣದ ಕೆಂಪು ಅಂಚಿನ ಇಳಕಲ್ ಸೀರೆಯನ್ನ ಪ್ರಾಣ ಹಕ್ಕಿಯಂತೆ ಹಿಡಿದು ಶರೀಫ ತಂದಿದ್ದಳು.  ’ಒಯ್ಯತೀರೇನ್ರಿ ಮೇಡಂ?’ ಅಂದಳು. ನನ್ನ ಮುಖ ನೋಡೆ ಅವಳು ಹಾಗೆ ಕೇಳಿರಬೇಕು.

ಶರೀಫ ರಾತ್ರಿಯೆಲ್ಲ  ನೇಯ್ಗೆ ಮಾಡಿ, ಬೆಳಗ್ಗೆ ಅಷ್ಟೊತ್ತಿಗೆ ಎದ್ದು,  ಎರಡು ಸುತ್ತು ಚಾ ಕುಡಿದು, ಮನೆ ಕೆಲಸ ಮಾಡಿ,  ನ್ಯಾಶನಲ್ ಹೈವೇಗೆ ತನ್ನ ಮನೆಯಿಂದ ಸುಮಾರು ದೂರ ನಡೆದು ಬಂದು, ಅಲ್ಲಿಂದ ಹುನುಗುಂದದ ಬಸ್ಸು ಹಿಡಿದು, ಆಫೀಸಿಗೆ ಆ  ವೈಶಾಖ ಮಾಸದ ಬಿಸಿಲಲ್ಲಿ ನಡೆದು ಬರುವ ಹೊತ್ತಿಗೆ ಹನ್ನೊಂದು ಆಗಿತ್ತು. ಸಂಘದೋರಲ್ಲ ಬಂದು ಬಿಟ್ಟಿರುತ್ತರೆಂದು ಬೇಗ ಕಾಲು ಹಾಕುತ್ತ, ತನ್ನ ಕೈಯಲ್ಲಿ ಆ ಸಣ್ಣ ಕವರ್ ಅನ್ನು ಹಕ್ಕಿ ಹಾಗೆ ಹಿಡಿದು ಬಂದಿದ್ಳು. ಶರೀಫ ಸಂಘ ಸೇರಿ ಆರು ವರುಷಗಳೀಗ. ಇಳಕಳ್  ಸೀರೆಯ ಕೈ ಮಗ್ಗ ಓಡಿಸುತ್ತ, ಅವಳು ಒಬ್ಬಳೆ ನಿಂತು ಮೂರು ಮಕ್ಕಳನ್ನು ಸಾಕಿದೆ ಅನ್ನುತ್ತಾಳೆ.  ಈಗಲು ಚುರುಕು ಕಣ್ಣು, ಸುಂದರ ನಗುವಿನ ಶರೀಫ ಪ್ರಾಯದಲ್ಲಿ ಬಹಳ ಸುಂದರವಾಗಿದ್ದಳೇನೊ! ಸಂಘದ ವತಿಯಿಂದ ಸಾಲ ಪಡೆದು ಎರಡು  ಬಾರಿ ಮೊತ್ತವನ್ನ ತೀರಿಸಿದ್ದಾಳೆ. ’ಇಬ್ಬರ ಗಂಡ ಮಕ್ಕಳನ್ನು ಈ ಸಾಲ ತೆಗೆದ ನಾನು ನಿಲ್ಲಿಸಿದೆ ನೋಡ್ರಿ ಮೇಡಂನೋರೆ’ ಅಂದಳು.  ಮಕ್ಕಳನ್ನು ದಡ ತಲುಪಿಸಿ, ಮದುವೆ ಮಾಡಿ, ಈಗಲೂ ಒಂದು ದಿನಕ್ಕೆ ಎರಡು ಸೀರೆ ನೇಯಬಲ್ಲೆ ಎಂದು ಉಲ್ಲಾಸದಿಂದ ಹೇಳುವ ಶರೀಫ ತನ್ನ ಸೀರೆಗಳ ಬಗ್ಗೆ ಬಹಳ ವಾತ್ಸಲ್ಯದಿಂದ ಮಾತನಾಡಿದಳು.

ತರಬೇತಿಯ ಮುಗಿದ ಮೇಲೆ ಎಲ್ಲರಿಗೂ ತರಬೇತಿಯ ಬಗ್ಗೆ ಏನನಿಸಿತು ಎಂದು ಕೇಳುವಾಗ ಅವಳು  ’ನನಗೆ ನೀವು ಹೇಳಿದ್ದಲ್ಲ ಮನಸ್ಸಿಗೆ ಬಂತ್ರಿ. ನನ್ನ ಸೊಸಿಗೆ ರೀ ..ಹೆರಗೆ ನೋವು ಬಂತಂತ ಸರ್ಕಾರಿ ದವಾಕಾನೆಗೆ  ಒಯ್ಯದ್ವಿರೀ, ಆಗ ಅಲ್ಲಿನ ಡಾಕ್ಟರ್ ಇದು ಅಪೇರೇಷನ್ ಮಾಡಬೇಕ, ಹಾಗೆ ಆಗೂದಿಲ್ಲ ಅಂದ್ರಿ. ನಂಗೆ ಅದು ಸರಿ ಕಾಣಲಿಲ್ಲರಿ. ಬ್ಯಾಡೆಂದು ಮನೀಗೆ ವಾಪಾಸ್ಸು ಬಂದು ನಾನು ನಮ್ಮ ಓಣಿಲಿದ್ದ ಇನ್ನೊಂದು ಆಕೀನೂ ಸೇರಿ ಆರಾಮ್ ಹೆರಗಿ ಮಾಡ್ಬಿಟ್ವಿರಿ. ನನಗ ಬಹಳ ಸಿಟ್ಟು ಬಂದು, ಮಗೀನ ಎದಿ ಮ್ಯಾಲೆ ಹಾಕಿಕೊಂಡು ಸೀದಾ ದವಾಕಾನಕ್ಕೆ ಹೋದೇನ್ರಿ. ನಮ್ಮ ಸಂಘದ  ಮಹಿಳಿಯರಿಗೆ ಫೊನ್  ಹಚ್ಚಿ, ಅವ್ರು ಅಲ್ಲಿಗ ಬಂದ್ರಿ. ಎಲ್ಲ ಸೇರಿ ದವಾಕಾನ ಮುಂದ ಕೂತ್ ಕೂಗಾಡಿದ್ವಿ. ’ಡಾಕ್ಟರ್ ವಿದ್ಯೆ ಕಲ್ತಿ ?ಇಲ್ಲ ಯಾವ ವಿದ್ಯೆ ಕಲ್ತಿ?” ಅಂತ ಜಗ್ಗಿ  ಗಲಾಟೇರಿ. ಆಮೇಲೆ ಈಗ ಸರ್ಕಾರಿ ದವಾಖಾನ  ಸ್ವಲ್ಪ ಸರಿ ಅಗೈತಿ ನೋಡ್ರಿ. ಹಿಂಗ ..’ ಅಂತ ಅವಳು ಜೋರು ಗಂಟಲಲ್ಲಿ ನಗುತ್ತ ಮಾತನಾಡುತ್ತಿದ್ದರೆ, ನಾನು ಮಾತನಾಡುವುದನ್ನು ನಿಲ್ಲಿಸಿ ಅವಳು ಮಾತನ್ನೇ ಕೇಳುತ್ತ ಕೂತೆ. ಅಲ್ಲಿಂದ ಪ್ರಾರಂಭವಾದ ಮಾತು ಎಲ್ಲೆಲ್ಲೊ ಹೋಯಿತು…

ಆಮೇಲೆ   ಅಲ್ಲಿನ  ಸಿಬ್ಬಂದಿ ಅವರು ಮಾತನಾಡುತ್ತ  ಶರೀಫ ಬಹಳ ಕಷ್ಟ ಪಟ್ಟು ದುಡಿತಾಳೆ, ಮನೆಯಲ್ಲಿ ಬಹಳ ಸಮಸ್ಯೆ ಇದೆ. ಆದ್ರೆ ಅವಳು ಬಹಳ  ಗಟ್ಟಿ, ಮಹಾ ಜಗಳ ಗಂಟಿ, ಮನಸ್ಸಿದ್ದರೆ ಮಾತು ಕೇಳುತ್ತಾಳೆ.. ಇಲ್ಲವಾದ್ರೆ ಬಹಳ ಹಟ ಮಾರಿ, ಕಳೆದ ಉರುಸಿಗೆ ಒಳ್ಳೆ ಸೀರೆ ನೇಯ್ದಳು…ಹೀಗೆ ಏನೇನೊ ಹೇಳಿದರು.

ಹುನಗುಂದ ಬಿಟ್ಟು ಬಂದರೂ ಶರೀಫ ನನ್ನನ್ನು ಬಿಡುವುದಿಲ್ಲ.   ’ನಾನು ಬೆಳಗ್ಗೆ ನಾಸ್ತ ಮಾಡುವುದನ್ನು ಬಿಟ್ಟು ಇಪ್ಪತ್ತು ವರುಷ ಆಯ್ತು . ಮುಂಜಾನಿ ಚಾ ಇದ್ದರೆ ಆತು ನೋಡ್ರಿ’  ಅಂತ ತನ್ನ ನೇಯ್ಗೆಯ ಬಗ್ಗೆ ಸುದೀರ್ಘವಾಗಿ  ವಿವರಿಸುವ ಅವಳ ಪರಿ ನನಗೆ ಮರೆಯಲು ಸಾದ್ಯವಿಲ್ಲ. ಯಾವ ಸಿದ್ದಾಂತದ ಅಂಕೆಗೂ ಸಿಗದ ಶರೀಫಾಳ ಕಾಯಕ, ಹಟ, ಮಕ್ಕಳ ಮೇಲಿನ ವ್ಯಾಮೋಹ, ಅವಳ ಆ ದಣಿದ ಕಣ್ಣುಗಳು, ಅವಳ ನೀಳ ಕೈಗಳು, ಮಾತಿನ ಚುರುಕುತನ …ಅವಳ ಜೀವನವನ್ನು ಹೇಗೆ  ವಿವರಿಸುವುದು? ಬದುಕು ತುಂಬ ದೊಡ್ಡದು, ಅದರ ಮುಂದೆ ಬರವಣಿಗೆ, ಸಿದ್ದಾಂತ ಎಲ್ಲ ಪೊಳ್ಳು ಅನಿಸುತ್ತೆ, ಬದುಕುವುದೇ ಅತಿ ಶ್ರೇಷ್ಟವಾದದು…ಅಷ್ಟೇ ನಾವು ಮಾಡಬೇಕಾದುದು.

Advertisements

~ by Usha B N on June 7, 2011.

2 Responses to “ಶರೀಫಾಬೀ ಹಾಗೂ ಇಳಕಲ್ ಸೀರೆ”

  1. correct aagi helide kane, after a long time i met people so committed in development sector. such brilliant people, not bothered about awards, name they work as though their is no tomorrow… some of them were so good… hope i will be albe to write about them like you

  2. when I read about sharifa, I have a disquieting feeling. As if I don’t belong and I don’t belong because I have made sharifa’s life so arduous. No I don’t belittle her joy , love for life, skills or dignity. I just feel her life could’ve been less arduous. That leisure is not such a bad word…

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 
%d bloggers like this: