ಮಾಲತಶ್ರೀ ಮೈಸೂರು: ಒಂದು ರಂಗ ಪಯಣ, ಭಾಗ ೧

(ಇದು ನಾನು ವಿಕ್ರಾಂತ ಕರ್ನಾಟಕ ಹಾಗೂ ಗೆಳತಿ ಪತ್ರಿಕೆಗೆ ಮಾಡುತ್ತಿದ್ದ ರಂಗ ಕಲಾವಿದೆಯರೊಡನೆ ನಡೆಸಿದ ಸಂಭಾಷಣೆಯ ಭಾಗ. ಮಾಲತಶ್ರೀ ಮೈಸೂರು ನನಗೆ ಬಹಳ ಹಿಡಿಸಿದ ಕಲಾವಿದೆ. ಅವರನ್ನು ಭೇಟಿಯಾದ ನೆನಪು ಸದಾ ನನ್ನೊಳಗೆ ಇರುತ್ತದೆ)


ಮಾಲತಶ್ರೀ ಮೈಸೂರು ೧೯೭೦ ದಶಕದಲ್ಲಿ ಕರ್ನಟಕದ  ವೃತ್ತಿ ರಂಭೂಮಿಯಲ್ಲಿ ಮೂಡಿಬಂದ ಪ್ರಮುಖ ಹೆಸರು. ಆ ಸಮಯದ ಸಾಮಾಜಿಕ ನಾಟಕಗಳಲ್ಲಿ ಅಪಾರ ಜನಪ್ರೀಯತೆ ಕಂಡವರು. ೧೯೭೪ನಲ್ಲಿ ಚಿಕ್ಕಸೊಸೆ ನಾಟಕದಲ್ಲಿ ಎಲ್ಲರ ಗಮನ ಸೆಳೆದ ಮಾಲತಶ್ರೀ ಈವರೆಗೂ ತಮ್ಮ ರಂಗ ಪಯಣವನ್ನು ಎಡಬಿಡದೆ ಮುಂದುವರಿಸಿಕೊಂಡು ಬಂದ್ದಿದ್ದಾರೆ. ಆಂದು ಅವರು ನಟಿಸಿದ ಸಾಮ್ಮಾಜಿಕ ನಾಟಕಗಳು ಕರ್ನಾಟಕದ ನಾನಾ ಭಾಗಗಳಲ್ಲಿ ಸುತ್ತುತ್ತಾ,  ೩೦೦ -೪೦೦ ಶೋಗಳನ್ನು ಮಾಡಿದ್ದೂ ಇದೆ. ಮಾಲತಶ್ರೀ ಮೈಸೂರು ಹೆಸರು ಅಂದಿನ ಮನೆಮಾತಗಿತ್ತು. ಅಗಾಗಲೆ ಸಿನಿಮಾ ಎಲ್ಲೆಡೆ ಜನಪ್ರೀಯವಾಗಿದ್ದರೂ,  ವೃತ್ತಿ ರಂಭೂಮಿಯ ನಾಟಕಗಳಗೆ ಒಳ್ಳೆಯ ಪ್ರತಿಕ್ರಿಯೆ ದೊರೆಯುತ್ತಿತ್ತು. ಮಾಲತಶ್ರೀ ಅವರ ಖಾನಾವಳಿ ಚೆನ್ನಿ, ಭೂಮಿತೂಕದ ಹೆಣ್ಣು, ಗರೀಬಿ ಹಟಾವೋ, ಬಡವರೂ ನಗಬೇಕು, ಬಸ್ ಕಂಡಟ್ಕರ್ ಪಾತ್ರಗಳು ಸೂಪರ್ ಹಿಟ್ ಆಗಿದ್ದವು.

ಅವರ ರಂಗ ಯಾತ್ರೆ, ಅದರೊಡನೆ ಬೆಸೆದುಕೊಂಡ ಅವರ ಜೀವನದ  ಹೋರಾಟಗಳು ಅವರ ಜೀವನ ಕತೆಯಷ್ಟೇ ಅಲ್ಲದೆ ರಂಭೂಮಿಯ ಅನೇಕ ಮಹಿಳೆಯರ ಅನುಭವವನ್ನು ಬಿಂಬಿಸುತ್ತದೆ. ಅಂದಿನ ಹಿರಿಯ ನಟರಾದ ಅಂಬುಜಮ್ಮ, ನಾಗರತ್ನಮ್ಮ, ಆಬ್ಬಾಸ್ ಅಲಿ, ಹಿರಣಯ್ಯ ಮುಂತಾದವರೊಡನೆ ಕೆಲಸ ಮಾಡಿರುವ ಮಾಲತಶ್ರೀಯವರು ತಮ್ಮ  ಜೀವನದ ನೋವು ನಲಿವುಗಳ ಬಗ್ಗೆ ನಾನು ನಡೆಸಿದ ಸಂಭಾಷಣೆಯ ಆಯ್ದ ಭಾಗಗಳು:

ಪ್ರ: ನಿಮ್ಮ ಆತ್ಮ ಕಥೆ ’ತರೆ ಸರಿದಾಗ’ ಓದಿದೆ. ನಿಮ್ಮ  ಜೀವನದ ಅನಭವಗಳು ಅದರಲ್ಲಿ ಬಹಳ ಚೆನ್ನಾಗಿ ಮೂಡಿ ಬಂದಿದೆ. ಕಂಪನಿ ನಾಟಕಗಳ ಪರಿಚಯ ಜನರಿಗೆ ಇರಬಹುದು, ಆದರೆ ಒಂದು ಕಲಾವಿದೆಯಾಗಿ, ಮಹಿಳೆಯಾಗಿ ವೃತ್ತಿ ರಂಭೂಮಿಯ ನಿಮ್ಮ ಅನುಭವ ವಿಶಿಷ್ಟವಾದುದು. ಒಂದು ರೀತಿ ನಿಮ್ಮ ಕತೆ ಇನ್ನೂ ಅನೇಕರ ಕತೆಯೂ ಹೌದಲ್ಲವೆ?

ಮಾ: ಹೌದು, ತುಂಬ ಜನ ಇದ್ದಾರೆ, ಕಂಪಿನಿಗಳಲ್ಲಿ ಹಲವಾರೂ ವರಷಗಳು ದುಡಿದವರು ಇಂದು ಬಹಳ ಕಷ್ಟದಲ್ಲಿ ಇದ್ದಾರೆ. ಕಂಪನಿಗಳು ಮುಚ್ಚಿದ ಮೇಲೆ, ಅವರವರ ಮನೆ ಸೇರಿಕೊಂಡು, ಯಾವುದೇ ನೆರವಿಲ್ಲದೆ ಬಹಳ ಕಷ್ಟ ಪಡುತ್ತಿದ್ದಾರೆ. ಒಂದು ಕಲಾವಿದೆಯಾಗಿ ದಿನವೆಲ್ಲಾ ಎಷ್ಟೇ ಕಷ್ಟ ಪಟ್ಟರು ರಾತ್ರಿ ಶೋನಲ್ಲಿ ಸರಿಯಾಗಿ ಡೈಲಾಗ್ ಹೇಳಿದಾಗ ಎಲ್ಲರೂ ಚಪ್ಪಾಳೆ ಹೋಡಿತಾರಲ್ಲ, ಆಗ ಎಲ್ಲಾ ಕಷ್ಟ ಮರೆತುಹೋಗತ್ತೆ.

ಪ್ರ: ಗೋಕಾಕ್ ನ ಶಾರದ ಕಂಪನಿಯಲ್ಲಿ ನೀವು  ರಂಭೂಮಿಯನ್ನು ಪ್ರವೇಶಿಸಿದಿರಿ, ಅಂದಿನ ವಾರತಾವರಣ ಕಂಪನಿಯಲ್ಲಿ ಹೇಗಿತ್ತು?

ಮಾ:  ತುಂಬಾ ಚೆನ್ನಾಗಿತ್ತು. ಆಗೆಲ್ಲ ಗುರುಗಳ  ಮಾರ್ಗದರಶವಿಲ್ಲದೆ ಸ್ಟೇಜ್ ಹತ್ತಲು ಬಿಡುತ್ತಿರಲಿಲ್ಲ. ಈಗೆಲ್ಲ ಮಾತು ಕಲಿತು ಒಪ್ಪಿಸಿದರೆ ಸಾಕು. ಆದ್ರೆ ಆಗ ಒಂದು ಸಣ್ಣ ವ್ಯತ್ಯಾಸ ಆದ್ರೂ ನಮ್ಮನ್ನ ಸ್ಟೇಜ್ ಮೇಲೆ ಬಿಡುತ್ತಿರಲಿಲ್ಲ.  ಒಂದು ಸೀನ್ ನಲ್ಲಿ ಒಂದು ಸಣ್ಣ ತಪ್ಪಾದ್ರೂ ಗುರುತಿಸಿ ತಿಳಿಸ್ತಿದ್ರು.  ಮೈಸೂರಿನಿಂದ ಬಂದ ನನ್ನ ಉಚ್ಚರಣೆ ಸ್ವಲ್ಪ ಭಿನ್ನವಾಗಿತ್ತು, ಅದನ್ನು ತಿದ್ದಿಕೊಳ್ಳುವರೆಗೂ ನನ್ನನು ಸ್ಟೇಜ್ ಮೇಲೆ ಬಿಡಲಿಲ್ಲ. ನಾನೂ ಬೇಗ ಕಲಿತುಕೊಂಡೆ. ಪ್ರೋತ್ಸಾಹ ಬಹಳವಿತ್ತು, ಪ್ರೀತಿಯೂ ಇತ್ತು. ಬಸವಣ್ಣನೊಪ್ಪೊರು ಅಂತ ಇದ್ರು, ಅವರೇ ನನ್ನ ಗುರುಗಳು, ಅವರೇ ನನಗೆ ಬಣ್ಣ ಹಚ್ಚಿದ್ರು.

ಅವರು ನನಗೆ  ’ಅವರು ಬಹಳ ಚೆನ್ನಾಗಿ ಮಾಡ್ತಿದ್ರು’ ಅಂತ ಯಾರೊ ಬಗ್ಗ ಹೇಳಿದ್ರೆ ನನಗೆ ಆಗ ತುಂಬಾ ಸಿಟ್ಟು ಬರ್ತಿತ್ತು. ’ಅವರು ಚೆನ್ನಾಗಿ ಮಾಡ್ತಿದ್ರು ಅಂತ ಹೇಳುವ ಬದಲು, ಅವರು ಹೀಗೆ ಮಾಡ್ತಿದ್ರು , ನೀನು ಹೀಗೆ ಮಾಡು ಅಂತ ಹೇಳಿ, ಒಂದು ರುಪಾಯಲ್ಲಿ ನಾಕಾಣಿಷ್ಟು ಆದ್ರೂ ಅದನ್ನು ಮಾಡ್ತಿನಿ’ ಅಂತ ನಾನು ಹೇಳ್ತಿದ್ದೆ. ಕಲಾವಿದೆ ಆಗಬೇಕೆಂಬ ಹುಚ್ಚು ನನಗೆ ಆಗ ಬಹಳವಿತ್ತು.  ಅವರು ಯಾವ ಡೈಲಾಗ್ ಗೆ ಚಪ್ಪಾಳೆ ತೊಗೊತಿದ್ರೋ ಅದೇ ಡೈಲಾಗ್ ಗೆ ನಾನು ಚಪ್ಪಾಳೆ ತೊಗೊಬೇಕಂತ ನನಗೆ ಬಹಳ ಆಸೆ.  ಅಷ್ಟು ಪ್ರಯತ್ನ ನಾನು ಮಾಡ್ತಿದ್ದೆ. ಒಂದು ಹೊಸ ನಾಟಕ ಅಂದ್ರೆ ಅದರೆ ಬಗ್ಗೇನೆ ಯೋಚ್ನೆ, ಹೇಗೆ ಡೈಲಾಗ್ ಹೇಳ ಬೇಕು, ಹೇಗೆ ನಿಂತ್ಕೋಬೇಕು, ಯಾವ ಮೇಕಪ್ ಸರಿ ಹೊಂದತ್ತೆ …ರಾತ್ರಿ ನಿದ್ದೆ ಸಹ ಮಾಡ್ತಿರಲಿಲ್ಲ. ಅದರಲ್ಲೆ ಮುಳುಗಿಹೋಗ್ತಿದ್ದೆ. ಮೊದಲನೆ ನಾಟದಲ್ಲಿ ಸಾದ್ವಿ ಪಾರ್ಟ್ ಮಾಡಿದ್ದು, ಮತ್ತೆ ಹೊಸ ನಾಟಕದಲ್ಲಿ ಸಾದ್ವಿ ಪಾರ್ಟ್ ಕೊಟ್ರೆ ಅದನ್ನು ಹೇಗೆ ಭಿನ್ನವಾಗಿ ಮಾಡಬೇಕಂತ ನಾನೆ ಯೊಚ್ನೆ ಮಾಡ್ತಿದ್ದೆ. ಪಾರ್ಟ್ ಮಾಡಿದ ಮೇಲೆ ಗೇಟಿನಲ್ಲಿ ಟಿಕೆಟ್ ತೆಗೆದುಕೊಳ್ಳುವ ಹುಡುಗನನ್ನು ’ಇವತ್ತು ನನ್ನ ಪಾತ್ರ ಹೇಗಿತ್ತು?’ ಅಂತ ಕೇಳಿಕೊಳ್ತಿದ್ದೆ. ಒಮ್ಮೊಮ್ಮೆ ನಾನೆ ನಾಟಕ ಮುಗಿದ  ತಕ್ಷಣ ಡ್ರೆಸ್ ಬದಲಾಯಿಸಿ, ಜನ ಮದ್ಯೆ ದೂರಿ ಅವರು ಮಾತಾಡೋದನ್ನು ಕೇಳಿಕೊಳ್ತಿದ್ದೆ. ಒಂದು ಪಾತ್ರ ಅಂದ್ರೆ ನನಗೆ ಅಷ್ಟು ಹುಚ್ಚಿತ್ತು.

ಸಣ್ಣವಳಿದ್ದಾಗ  ಪೌರ್ರಾಣಿಕ ನಾಟಕಗಳನ್ನ ಮಾಡಿದ್ದೇನೆ. ಸ್ತ್ರೀನಾಟಕ ಮಂಡಲಿಯಲ್ಲಿ ೮ ವರ್ಷದವಳಾಗಿದ್ದಾಗ  ಮಕರಂದ, ಸಹದೇವನ ಪಾತ್ರ ಮಾಡ್ತಿದ್ದೆ. ಆಗ ನಾಗರತ್ನಮ್ಮ ನವರ ಕಂಸನ ಪಾತ್ರ ನೋಡ್ತಿದ್ದೆ, ಅವರು ಅದ್ಭುತವಾಗಿ ಪಾತ್ರ ಮಾಡ್ತಿದ್ರು.

ಪ್ರ: ಅಂಬುಜಮ್ಮನವರೋಡನೆ ನೀವು ಕೆಲಸ ಮಾಡಿದ್ದೀರ..

ಮಾ: ಹೌದು. ಅಂಬುಜಮ್ಮನವರು ಪಾತ್ರ ಮಾಡುವಾಗ ನಾನು ನಿಂತು ಅವರನ್ನೇ ನೋಡ್ತಿದ್ದೆ.  ಅವರ ಹತ್ರ ಹೋಗಿ ಇದನ್ನು ಹೇಗೆ ಮಾಡಬೇಕು ಅಂತ ಕೇಳಿಕೊಳ್ಳುತ್ತಿದ್ದೆ. ಅವರು ನನಗೆ ತಲೆ ಬಾಚಿ, ಮೇಕಪ್ ಮಾಡ್ರಿದ್ರು, ಬಹಳ ಪ್ರೀತಿಯಿಂದ ನಮ್ಮನ್ನ ನೋಡ್ತಿದ್ರು.  ಆಗ ಅದೇ ಕಂಪನಿಯಲ್ಲಿ ನಾಗರತ್ನಮ್ಮ ಅಂತಾ ಇದ್ರು, ಅವರು ಇನ್ನೂ ಇದ್ದಾರೆ, ಆದರೆ ಅಂಬುಜಮ್ಮ ಈಗಿಲ್ಲ. ಸ್ತ್ರೀ ನಾಟಕ ಮಂಡಲಿಯಲ್ಲಿ  ಮಹಿಳೆಯರು ಮಾತ್ರ, ಹೀಗಾಗಿ ಜನ ತಮ್ಮ ಹೆಣ್ಣು ಮಕ್ಕಳನ್ನಾ ಅಲ್ಲಿ ನಾಟಕಕ್ಕೆ ಸುಲಭವಾಗಿ ಬಿಡುತಿದ್ರು. ಮಹಿಳೆಯರೆ ಪುರಷರ ಪಾತ್ರ ಮಾದ್ತಾರೆ ಅಂತ ಜನ ನಾಟಕ ನೊಡೋಕೆ ಬಹಳ ಸೇರುತ್ತಿದ್ದರು. ನಾಗರತ್ನಮ್ಮ ನವರ ಕಂಸ, ರಾವಣ, ಭೀಮನ ಪಾತ್ರ ಬಹಳ ಚೆನ್ನಾಗಿ ಇರುತ್ತಿತ್ತು.

ನಾವೆಲ್ಲ ಒಂದೇ ಮನೆಯಲ್ಲಿ ಒಟ್ಟಿಗೆ ಇರುತ್ತಿದ್ದೆವು. ಒಂದು ರೂಮಿನಲ್ಲಿ ನಟಿಯರೆಲ್ಲ ಉದ್ದಾಕ್ಕೆ, ಸಾಲಾಗಿ ಮಲಗುತ್ತಿದ್ದೆವು. ಒಂದು ಟ್ರಂಕು, ಹಾಸಿಗೆ ಇಟ್ಟಿಕೊಳ್ಳುಷ್ಟು ಒಬ್ಬರಿಗೆ ಜಾಗ ಇರುತ್ತಿತ್ತು. ನಮ್ಮನ್ನ ಒಬ್ಬೊಂಟಿಯಾಗಿ ಎಲ್ಲೂ ಕಳಿಸುತ್ತಿರಲಿಲ್ಲ. ಒಂದು ಸಿನಿಮಾಗೆ ಹೋಗಬೇಕೆಂದ್ರೂ ಒಂದು ಗಾಡಿ ಮಾಡಿ ಎಲ್ಲರನ್ನೂ ಕಳುಹಿಸುತ್ತಿದ್ದರು. ಬೆಳಗಿನ ಬೆಳಕಲ್ಲಿ ನಮ್ಮನ್ನ ಜನ ನೋಡಿದರೆ ರಾತ್ರಿ ಹೊತ್ತು ನಮ್ಮನ್ನ ನೋಡಲು ನಾಟಕಕ್ಕೆ ಬರಲು ಅವರಿಗೆ ಆಸಕ್ತಿ ಕಡಿಮೆಯಾಗುತ್ತೆ ಅಂತಾನೊ ಏನೋ ನಮ್ಮನ್ನು ಬೆಳಗ್ಗೆ ಹೊರಗೆ ಹೆಚ್ಚು ಬಿಡ್ತಿರಲಿಲ್ಲ.

Advertisements

~ by Usha B N on September 27, 2010.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 
%d bloggers like this: