ಶರೀಫಾಬೀ ಹಾಗೂ ಇಳಕಲ್ ಸೀರೆ

•June 7, 2011 • 2 Comments

ಈ ಸಲ ನಾನು ತರಬೇತಿ ನೀಡಲು  ಹೋದದ್ದು ಹುನಗುಂದಕ್ಕೆ. ತರಬೇತಿಗೆ ಬರಬೇಕಾದ ಹಲವಾರು ಮಹಿಳೆಯರು ಬರಲಿಲ್ಲ. ಕಾರಣ ಅದು ’ಲಗ್ನದ ಸೀಸನ್ ’. ಹೀಗಾಗಿ ಕೊನೆಗೆ ಬಂದ ಕೆಲವೇ ಕೆಲವು ಮಹಿಳೆಯರು ’ಆಫೀಸಿಗೆ’  ತಲುಪುವುದರಲ್ಲಿ ಬಹಳ ಸಮಯ ಆಗಿತ್ತು. ಹಾಗೆ ತಡವಾಗಿ ಬಂದವರಲ್ಲಿ ಶರಫಾಬೀ ನೂ ಒಬ್ಬಳು. ೫೦ರ ಆಸುಪಾಸಿನ ಶರೀಫಾ ಕಡ್ಡಿಯಂತೆ ತೆಳ್ಳಗೆ ಎತ್ತರದ ಆಳು. ಅವಳು ತಡವಾಗಿ ತರಬೇತಿಗೆ ಬಂದ ಕಾರಣ ರಾತ್ರಿಯೆಲ್ಲ ಅವಳು ಸೀರೆ ನೇಯುತ್ತಿದ್ದಳೆಂತೆ. ಅವಳ ನೀಳ ಕೈಗಳಲ್ಲಿ ತಂದಿದ್ದ ಸಣ್ಣ ಕವರ್ ಒಳಗಿಂದ ತೆಗೆದ ಆ ಸೀರೆ, ಆಗಷ್ಟೆ ಮಾಡಿದ ಬಿಸಿ  ಸಾರಿನಂತೆ  ಘಮಘಮಿಸುತಿತ್ತು.  ಹಸಿರು ಬಣ್ಣದ ಕೆಂಪು ಅಂಚಿನ ಇಳಕಲ್ ಸೀರೆಯನ್ನ ಪ್ರಾಣ ಹಕ್ಕಿಯಂತೆ ಹಿಡಿದು ಶರೀಫ ತಂದಿದ್ದಳು.  ’ಒಯ್ಯತೀರೇನ್ರಿ ಮೇಡಂ?’ ಅಂದಳು. ನನ್ನ ಮುಖ ನೋಡೆ ಅವಳು ಹಾಗೆ ಕೇಳಿರಬೇಕು.

ಶರೀಫ ರಾತ್ರಿಯೆಲ್ಲ  ನೇಯ್ಗೆ ಮಾಡಿ, ಬೆಳಗ್ಗೆ ಅಷ್ಟೊತ್ತಿಗೆ ಎದ್ದು,  ಎರಡು ಸುತ್ತು ಚಾ ಕುಡಿದು, ಮನೆ ಕೆಲಸ ಮಾಡಿ,  ನ್ಯಾಶನಲ್ ಹೈವೇಗೆ ತನ್ನ ಮನೆಯಿಂದ ಸುಮಾರು ದೂರ ನಡೆದು ಬಂದು, ಅಲ್ಲಿಂದ ಹುನುಗುಂದದ ಬಸ್ಸು ಹಿಡಿದು, ಆಫೀಸಿಗೆ ಆ  ವೈಶಾಖ ಮಾಸದ ಬಿಸಿಲಲ್ಲಿ ನಡೆದು ಬರುವ ಹೊತ್ತಿಗೆ ಹನ್ನೊಂದು ಆಗಿತ್ತು. ಸಂಘದೋರಲ್ಲ ಬಂದು ಬಿಟ್ಟಿರುತ್ತರೆಂದು ಬೇಗ ಕಾಲು ಹಾಕುತ್ತ, ತನ್ನ ಕೈಯಲ್ಲಿ ಆ ಸಣ್ಣ ಕವರ್ ಅನ್ನು ಹಕ್ಕಿ ಹಾಗೆ ಹಿಡಿದು ಬಂದಿದ್ಳು. ಶರೀಫ ಸಂಘ ಸೇರಿ ಆರು ವರುಷಗಳೀಗ. ಇಳಕಳ್  ಸೀರೆಯ ಕೈ ಮಗ್ಗ ಓಡಿಸುತ್ತ, ಅವಳು ಒಬ್ಬಳೆ ನಿಂತು ಮೂರು ಮಕ್ಕಳನ್ನು ಸಾಕಿದೆ ಅನ್ನುತ್ತಾಳೆ.  ಈಗಲು ಚುರುಕು ಕಣ್ಣು, ಸುಂದರ ನಗುವಿನ ಶರೀಫ ಪ್ರಾಯದಲ್ಲಿ ಬಹಳ ಸುಂದರವಾಗಿದ್ದಳೇನೊ! ಸಂಘದ ವತಿಯಿಂದ ಸಾಲ ಪಡೆದು ಎರಡು  ಬಾರಿ ಮೊತ್ತವನ್ನ ತೀರಿಸಿದ್ದಾಳೆ. ’ಇಬ್ಬರ ಗಂಡ ಮಕ್ಕಳನ್ನು ಈ ಸಾಲ ತೆಗೆದ ನಾನು ನಿಲ್ಲಿಸಿದೆ ನೋಡ್ರಿ ಮೇಡಂನೋರೆ’ ಅಂದಳು.  ಮಕ್ಕಳನ್ನು ದಡ ತಲುಪಿಸಿ, ಮದುವೆ ಮಾಡಿ, ಈಗಲೂ ಒಂದು ದಿನಕ್ಕೆ ಎರಡು ಸೀರೆ ನೇಯಬಲ್ಲೆ ಎಂದು ಉಲ್ಲಾಸದಿಂದ ಹೇಳುವ ಶರೀಫ ತನ್ನ ಸೀರೆಗಳ ಬಗ್ಗೆ ಬಹಳ ವಾತ್ಸಲ್ಯದಿಂದ ಮಾತನಾಡಿದಳು.

ತರಬೇತಿಯ ಮುಗಿದ ಮೇಲೆ ಎಲ್ಲರಿಗೂ ತರಬೇತಿಯ ಬಗ್ಗೆ ಏನನಿಸಿತು ಎಂದು ಕೇಳುವಾಗ ಅವಳು  ’ನನಗೆ ನೀವು ಹೇಳಿದ್ದಲ್ಲ ಮನಸ್ಸಿಗೆ ಬಂತ್ರಿ. ನನ್ನ ಸೊಸಿಗೆ ರೀ ..ಹೆರಗೆ ನೋವು ಬಂತಂತ ಸರ್ಕಾರಿ ದವಾಕಾನೆಗೆ  ಒಯ್ಯದ್ವಿರೀ, ಆಗ ಅಲ್ಲಿನ ಡಾಕ್ಟರ್ ಇದು ಅಪೇರೇಷನ್ ಮಾಡಬೇಕ, ಹಾಗೆ ಆಗೂದಿಲ್ಲ ಅಂದ್ರಿ. ನಂಗೆ ಅದು ಸರಿ ಕಾಣಲಿಲ್ಲರಿ. ಬ್ಯಾಡೆಂದು ಮನೀಗೆ ವಾಪಾಸ್ಸು ಬಂದು ನಾನು ನಮ್ಮ ಓಣಿಲಿದ್ದ ಇನ್ನೊಂದು ಆಕೀನೂ ಸೇರಿ ಆರಾಮ್ ಹೆರಗಿ ಮಾಡ್ಬಿಟ್ವಿರಿ. ನನಗ ಬಹಳ ಸಿಟ್ಟು ಬಂದು, ಮಗೀನ ಎದಿ ಮ್ಯಾಲೆ ಹಾಕಿಕೊಂಡು ಸೀದಾ ದವಾಕಾನಕ್ಕೆ ಹೋದೇನ್ರಿ. ನಮ್ಮ ಸಂಘದ  ಮಹಿಳಿಯರಿಗೆ ಫೊನ್  ಹಚ್ಚಿ, ಅವ್ರು ಅಲ್ಲಿಗ ಬಂದ್ರಿ. ಎಲ್ಲ ಸೇರಿ ದವಾಕಾನ ಮುಂದ ಕೂತ್ ಕೂಗಾಡಿದ್ವಿ. ’ಡಾಕ್ಟರ್ ವಿದ್ಯೆ ಕಲ್ತಿ ?ಇಲ್ಲ ಯಾವ ವಿದ್ಯೆ ಕಲ್ತಿ?” ಅಂತ ಜಗ್ಗಿ  ಗಲಾಟೇರಿ. ಆಮೇಲೆ ಈಗ ಸರ್ಕಾರಿ ದವಾಖಾನ  ಸ್ವಲ್ಪ ಸರಿ ಅಗೈತಿ ನೋಡ್ರಿ. ಹಿಂಗ ..’ ಅಂತ ಅವಳು ಜೋರು ಗಂಟಲಲ್ಲಿ ನಗುತ್ತ ಮಾತನಾಡುತ್ತಿದ್ದರೆ, ನಾನು ಮಾತನಾಡುವುದನ್ನು ನಿಲ್ಲಿಸಿ ಅವಳು ಮಾತನ್ನೇ ಕೇಳುತ್ತ ಕೂತೆ. ಅಲ್ಲಿಂದ ಪ್ರಾರಂಭವಾದ ಮಾತು ಎಲ್ಲೆಲ್ಲೊ ಹೋಯಿತು…

ಆಮೇಲೆ   ಅಲ್ಲಿನ  ಸಿಬ್ಬಂದಿ ಅವರು ಮಾತನಾಡುತ್ತ  ಶರೀಫ ಬಹಳ ಕಷ್ಟ ಪಟ್ಟು ದುಡಿತಾಳೆ, ಮನೆಯಲ್ಲಿ ಬಹಳ ಸಮಸ್ಯೆ ಇದೆ. ಆದ್ರೆ ಅವಳು ಬಹಳ  ಗಟ್ಟಿ, ಮಹಾ ಜಗಳ ಗಂಟಿ, ಮನಸ್ಸಿದ್ದರೆ ಮಾತು ಕೇಳುತ್ತಾಳೆ.. ಇಲ್ಲವಾದ್ರೆ ಬಹಳ ಹಟ ಮಾರಿ, ಕಳೆದ ಉರುಸಿಗೆ ಒಳ್ಳೆ ಸೀರೆ ನೇಯ್ದಳು…ಹೀಗೆ ಏನೇನೊ ಹೇಳಿದರು.

ಹುನಗುಂದ ಬಿಟ್ಟು ಬಂದರೂ ಶರೀಫ ನನ್ನನ್ನು ಬಿಡುವುದಿಲ್ಲ.   ’ನಾನು ಬೆಳಗ್ಗೆ ನಾಸ್ತ ಮಾಡುವುದನ್ನು ಬಿಟ್ಟು ಇಪ್ಪತ್ತು ವರುಷ ಆಯ್ತು . ಮುಂಜಾನಿ ಚಾ ಇದ್ದರೆ ಆತು ನೋಡ್ರಿ’  ಅಂತ ತನ್ನ ನೇಯ್ಗೆಯ ಬಗ್ಗೆ ಸುದೀರ್ಘವಾಗಿ  ವಿವರಿಸುವ ಅವಳ ಪರಿ ನನಗೆ ಮರೆಯಲು ಸಾದ್ಯವಿಲ್ಲ. ಯಾವ ಸಿದ್ದಾಂತದ ಅಂಕೆಗೂ ಸಿಗದ ಶರೀಫಾಳ ಕಾಯಕ, ಹಟ, ಮಕ್ಕಳ ಮೇಲಿನ ವ್ಯಾಮೋಹ, ಅವಳ ಆ ದಣಿದ ಕಣ್ಣುಗಳು, ಅವಳ ನೀಳ ಕೈಗಳು, ಮಾತಿನ ಚುರುಕುತನ …ಅವಳ ಜೀವನವನ್ನು ಹೇಗೆ  ವಿವರಿಸುವುದು? ಬದುಕು ತುಂಬ ದೊಡ್ಡದು, ಅದರ ಮುಂದೆ ಬರವಣಿಗೆ, ಸಿದ್ದಾಂತ ಎಲ್ಲ ಪೊಳ್ಳು ಅನಿಸುತ್ತೆ, ಬದುಕುವುದೇ ಅತಿ ಶ್ರೇಷ್ಟವಾದದು…ಅಷ್ಟೇ ನಾವು ಮಾಡಬೇಕಾದುದು.

Advertisements

ನಾಲ್ಕು ಜೀವಗಳು ಹಾಗೂ ಮುಂಬೈ

•February 4, 2011 • 1 Comment

ಕಿರಣ್ ರಾವ್ ಅವರ ದೊಭಿ ಘಾಟ್ ಚಿತ್ರ  ನಿಜವಾಗಿಯೂ ರಿಫ್ರೆಶಿಂಗ್. ಚಿತ್ರ ಮುಂಬೈ ನಗರಿಯನ್ನು ನಾಲ್ಕು ಜನರ ಜೀವನದ ಲೆನ್ಸಿಂದ ನೋಡುತ್ತದೆ. ಮುಂಬೈ ಬಗ್ಗೆ ಈಗಾಗಲೆ ಹಲವಾರು ಚಿತ್ರಗಳು ಬಂದು ಹೋಗಿವೆ.  ಮುಂಬೈ ಮಹಾನಗರಿಯಲ್ಲಾದ ಬಾಂಬು ಸ್ಪೊಟ,  ರೌಡಿಗಳು, ಕಾರ್ಮಿಕರ ಬದುಕು, ಸ್ಲಂಗಳು- ಹೀಗೆ ಮುಂಬೈನ ವಿವಧ  ಮುಖಗಳು, ವಿಧ್ಯಮಾನಗಳನ್ನು ಕುರಿತು ಸಾಕಷ್ಟು ಸಿನಿಮಾಗಳು ಇತ್ತಿಚೆಗೆ ಬಂದಿವೆ. ಆದರೆ ಚಿತ್ರ ದೊಭಿ ಘಾಟ್ ಸ್ವಲ್ಪ ಬಿನ್ನ.  ಯಾಕೆ ಚಿತ್ರ ಚಂದವೆನಿಸಿತೆಂದರೆ ಇಲ್ಲಿ ಕತೆಯನ್ನು ಹೇಳಿಬಿಡಬೇಕೆಂಬ ಅವಸರವಿಲ್ಲ, ಕತೆಗೆ ತಿರುವುಗಳನ್ನು ಪಡೆದು ದೌಡಾಯಿಸಬೇಕೆಂಬ ಆತಂಕ, ಆತುರವಿಲ್ಲ. ಈ ಚಿತ್ರದ ಧಾಟಿಯೆ ಸೊಗಸು. ಮೊದಲನೆಯ ಸೀನಿನಲ್ಲಿ  ಟಾಕ್ಸಿಯೊಳಗೆ ತೂಗು ಹಾಕಿದ ಪ್ಲಾಸ್ಟಿಕಿನ  ದ್ರಾಕ್ಷಿ ಗೊಂಚಲು, ಬಳೆ ಅಂಗಡಿ, ಅತ್ತರ್ ಮಾರುವ ಮುದುಕ…ಹೀಗೆ ಸಾಧಾರಣವಾಗಿ ಹಿಂದಿ ಚಲನ ಚಿತ್ರಗಳ ಕಣ್ಣಿಗೆ ಬೀಳದ ವಿವರಗಳನ್ನು ಈ ಚಿತ್ರ ಎಚ್ಚರಿಕೆಯಿಂದ ಸೆರೆ ಹಿಡಿಯುತ್ತದೆ.

ನಾಲ್ಕು ಜನರು – ಅರುಣ್, ಯಾಸ್ಮಿನ್,  ಶಾಯ್ ಹಾಗೂ ಮುನ್ನ ಇವರು ಬದುಕುಗಳು ಕುತೂಹಲಕಾರಿಯಾಗಿ ಒಮ್ಮೊಮ್ಮೆ ಒಂದಾಗುತ್ತ, ಇನ್ನೊಮ್ಮೆ  ಅಕ್ಕ ಪಕ್ಕದಲ್ಲೆ ಹಾದು ಹೋಗುತ್ತ, ವಿವಿಧ ನೆಲೆಗಳಲ್ಲಿ ಪ್ರೀತಿ, ಒಂಟಿತನ, ಸ್ನೇಹ ಹಾಗೂ ನೆನಪುಗಳ ಹಳಿಗಳನ್ನು ದಾಟುತ್ತವೆ. ಮುಂಬೈ ನಗರದ ವೈವಿಧ್ಯಮಯ, ಉಲ್ಲಾಸಕರ, ಮಾನವೀಯ, ಕರಾಳ ಹಾಗೂ ಸಣ್ಣತನಗಳ ಮಧ್ಯೆ ಈ ನಾಲ್ಕು ಜೀವನಗಳು ಸಾಗುತ್ತವೆ. ತಮ್ಮ ಕನಸುಗಳನ್ನು, ಪ್ರೇಮವನ್ನು ತಿಳಿದೂ ಅದನ್ನು ಪಡೆಯಲು ಮನಸ್ಸು ಮಾಡದ  ಸೂಕ್ಷಮಗಳನ್ನು , ಮುನ್ನ ಯಾಸ್ಮಿನ್ನರ ಬದುಕಿನ ಅಚಾನಕ್  ತಿರುವುಗಳ ವಿಪರ್ಯಾಸಗಳನ್ನು ದಟ್ಟವಾಗಿ ನಮಗೆ ತಲುಪಿಸುತ್ತದೆ. ಯಾವ ಮೆಲೊಡ್ರಾಮವಿಲ್ಲದೆ, ಕತೆ ನಮ್ಮೊಡನೆ ಉಳಿಯುತ್ತೆ. ನನಗಂತೂ ಕೆಲವು ಸನ್ನಿವೇಶಗಳಲ್ಲಿ (ಅದರಲ್ಲೂ ಮುನ್ನ ಬಗ್ಗೆ) ಜಯಂತ್ ಕಾಯ್ಕಿಣಿಯವರ ಕತೆಯನ್ನು ಓದಿದ ಹಾಗೆ ಆಯ್ತು. ಮುಂಬೈನಯನ್ನು ಜಯಂತ್ ತಮ್ಮ ಕತೆಗಳಲ್ಲಿ ಆವಾಹಿಸಿಕೊಳ್ಳುವ ರೀತಿಯಲ್ಲೆ ಚಿತ್ರ ಸಹ ಕೆಲವು ಭಾಗಗಳಲ್ಲಿ ತೀವ್ರವಾಗಿ ನಗರದ ಬಗ್ಗೆ ಮಾತನಾಡುತ್ತದೆ.

ಚಿತ್ರದ ನಿಜವಾದ ಹೀರೊ ಛಾಯಾಗ್ರಾಹಕ ತುಶಾರ್ ಕಾಂತಿ ರೆ  ಅವರು, ಮತ್ತು ಗುಸ್ತಾವೊ ಸಂತ ಒಲಲ್ಲ ಅವರ ಸಂಗೀತ. ಅತ್ಯುತ್ತವಾದ  ಶಾಟ್ ಗಳು ಹಾಗೂ ಅದರೊಳಗೆ  ಸೇರಿಕೊಳ್ಳುವ ಸಂಗೀತ ಚಿತ್ರದ ನಿಜವಾದ  ಯಶಸ್ಸು. ನನಗೆ ಮರೆತು ಹೋದ ಬೇಗಂ ಅಕ್ತರ ’ಅಬ್ ಕೆ ಸಾವನ್ ’ ಟುಮ್ರಿ , ಮುಂಬೈನ  ದೀರ್ಘ ಮಳೆ, ಲೋಕಲ್ ಟ್ರೇನ್ ನ ಮಹಿಳೆಯರು….ಮುಂಬೈ ಮೇಲಿನ ನನ್ನ ಮೋಹ ಇನ್ನಷ್ಟು ಹೆಚ್ಚಿಸಿತು. ದೊಭಿ ಘಾಟ್ ಮುಂಬೈ ನಗರದ ಕಿನ್ನತೆ, ಎನರ್ಜಿ ಹಾಗೂ ಸತ್ವವನ್ನು ಪ್ರೀತಿಯಿಂದ ಹೇಳುವ ಪ್ರಯತ್ನ ಮಾಡೂತ್ತದೆ.

ಸುಮ್ಮನೆ

•January 18, 2011 • Leave a Comment

ಆಸೆ ಬುರುಕ ಅಲೆಗಳಿಗೆ

ತೆರೆ ತೆರೆದುಕೊಳ್ಳುವ

ಬಿಸಿ ಮರಳು!

 

ಊರ ತುಂಬ ಅಂಗಡಿಗಳು.

ನನಗೇನೂ ಬೇಡ.

 


ಮಸಾಲೆ ಅರೆವ ಮಹಾ

ಸುಂದರಿಗೆ

ಊಟ ಮಾಡುವ ಆಸೆಯಿಲ್ಲವಂತೆ!

ಕಾಮ್ರೇಡ್ ಮತ್ತು ಉಮ್ಮ – ಆಗ, ಈಗ

•January 10, 2011 • Leave a Comment

ಬಹಳ ವರ್ಷಗಳ ಹಿಂದೆ ಲಂಕೇಶ್ ಪತ್ರಿಕೆಯಲ್ಲಿ ಅಬ್ದುಲ್  ರಶೀದರ  ’ಕಾಮ್ರೇಡ್ ಮತ್ತು ಉಮ್ಮ ’ ಮೊದಲು ಓದಿದ್ದೆ. ಆಗ, ಅದು  ನನ್ನ ಆಕ್ಟಿವಿಸಂನ ಉತ್ತುಂಗದ ದಿನಗಳು. ಆ ಕತೆಯೊಳಗಿನ ಧ್ವನಿ ತಿಳಿಸುವ ದಂಧ್ವ, ವಿಪರ್ಯಾಸಗಳು, ಸೂಕ್ಷ್ಮಗಳು ನನ್ನನ್ನು ಚುಚ್ಚಿದ್ದವು.  ಕಾಮ್ರೇಡಿನ ಸೈಕಲ್ ಮಾತ್ರ ಮನಸ್ಸಿನಲ್ಲಿ ಅಚ್ಚು ಒತ್ತಿತ್ತು. ಆಮೇಲೆ ನನಗೆ ಕತೆಯ ಡಿಟೇಲ್ಸ್  ಮರೆತಂತಾದರೂ, ಆ ಚುಚ್ಚಿದ ಫೀಲಿಂಗ್ ಹಾಗೂ ಸೈಕಲ್ ನ ಚಿತ್ರ  ಜೀವಂತವಾಗಿದ್ದವು.

ಇತ್ತೀಚೆಗೆ ನಾನು ಹಾಗೂ ಗೆಳತಿ ಇಂದು, ಮಹಾ ಜ್ಞಾನಿಗಳು ನಡೆಸಿದ ಒಂದು  ಶಿಬಿರಕ್ಕೆ ಹೋಗಿದ್ದೇವು. ಶಿಬಿರದಲ್ಲಿ ಕೆಲವು ತಾತ್ವಿಕ ವಿಚಾರಗಳನ್ನು ಅತಿ ಸಂಕೀರ್ಣ ರೀತಿಯಲ್ಲಿ ಚರ್ಚಿಸಲಾಯಿತು. ನಾನಂತೂ ನನ್ನ ತಲೆಯೊಳಗಿರಬಹುದಾದ ಎಲ್ಲಾ ನರಗಳಿಗೆ ಭಾರಿ ಕಸತ್ತು ನೀಡುತ್ತಾ, ಅವರು ಹೇಳುವುದನ್ನೆಲ್ಲಾ  ಅರ್ಥ ಮಾಡಿಕೊಳ್ಳಲು ತಿಣುಕಿದೆ. ಅದು ಬಿಡಿ. ..  ಮಹಾ ಜ್ಞಾನಿಗಳು ಮಾತನಾಡುತ್ತಿದ್ದ ವಿಚಾರಗಳು ಒಂದು ತರಹದಲ್ಲಿ ಮುಖ್ಯಾವಾದವು, ನಿಜ.. ಆದರೆ ಕೊನೆಗೆ ನನಗೆ ಯಾಕೋ ಎಲ್ಲವು ನಿರಥರ್ಕವೆನಿಸಿತು. ಇಂದುಗೂ ಸಾಕು ಬೇಕಾಗಿ ಸುಮ್ಮನೆ ಇಬ್ಬರು ಅಲ್ಲಿಂದ ಹೊರಟೆವು. ಚಳಿಗಾಲದ ಮದ್ಯಹ್ನದ  ಹಿತವಾದ ಬಿಸಿಲಿನಲ್ಲಿ ರಸ್ತಗಳ ಮೇಲೆ ಕಳೆದು ಹೋದ ಹಸುಗಳಂತೆ ಅಲೆದವು… ಅತ್ತ , ಮಹಾ ಜ್ಞಾನಿಗಳನ್ನು ಪೂರ್ತಿಯಾಗಿ ನಿರಾಕರಿಸಲಾಗದೆ, ಇತ್ತ ಅರ್ಥವಾಗದ  ಹೈ ಥಿಯರಿಯ ತಮಷೆಯ ಬಗ್ಗೆ ನಗುತ್ತ,  ಬದುಕೆಂದರೆ ಏನಪ್ಪ ? ಅಂದುಕೊಂಡು ಮಾತನಾಡಿಕೊಂಡೆವು. ..ಕೊನೆಗೆ ಮನೆಯಲ್ಲಿ ನಮಗಾಗಿ ಕಾಯುತ್ತಿರುವ ಮಕ್ಕಳ  ಮುಖ ನೆನಪಾದ ಹಾಗೆ, ಹುರುಪಿನಿಂದ ಮನೆಗೆ ಹೊರೆಟೆವು…

ಅಲ್ಲಿಂದ ಬಂದು ನಾನು ಅಬ್ದುಲ್ ರಶೀದರ  ’ಈ ತನಕದ ಕತೆಗಳು’  ಓದಲು ಶುರು ಮಾಡಿದೆ. ’ಕಾಮ್ರೇಡ್ ಮತ್ತು ಉಮ್ಮ’  ಓದಿ ಯಾಕೋ ಹೇಳಲಾರದ ಸಂಕಟ, ಒಪ್ಪಿಗೆ, ಧನ್ಯತೆ ತುಂಬಿಕೊಂಡಿತು. ಹಲವಾರು ವರ್ಷಗಳು ಹಳ್ಳಿಗಳಲ್ಲಿ, ಪ್ರತಭಟನೆಗಳಲ್ಲಿ, ಸಿಕ್ಕ ಜನರ ಕಣ್ಣುಗಳಲ್ಲಿ, ಅವರು ಹೇಳದ ಹಾಗೂ ಹೇಳಿದ ಮಾತುಗಳಲ್ಲಿ , ಗೆಳೆತನ, ಸಂಬಂಧಗಳಲ್ಲಿ  ಮನದಟ್ಟಾದ ಹಲವಾರು ಎಳೆಗಳು ಒಮ್ಮೆಗೆ ಝಗ್ ಎಂದು ಪ್ರಕಾಶಿಸಿದವು. ಎಲ್ಲ ವೈಯರ್ರು ಗಳು ಒಮ್ಮಲೆ ಬೆಸದುಕೊಂಡು, ಸರಿಯಾಗಿ ಕನೆಕ್ಷನ್ ಆಗಿಬಿಟ್ಟಂತೆ! ಕಾಮ್ರೇಡಿನ ಕನ್ವಿಕ್ಷನ್ – ಅವನ ತಾಯಿ, ಆ ಹುಡುಗನ ಬದುಕು, ತಮಾಷೆ, ವಿಷಾದ , ಪ್ರೀತಿಯ ….ಮದ್ಯೆ ಸುಳುಯುವ ಹಾಸ್ಟಲ್, ಸೈಕಲ್ಲು, ನೀಲಗಿರಿಯ ಮರಗಳು…. ಆದರೆ ಈ ಸಲ ಕತೆ ನನ್ನನ್ನು ಚುಚ್ಚಲಿಲ್ಲ…ನನ್ನ ತಾಯಿ, ಅಜ್ಜಿ, ನನ್ನ ಕೆಲಸದ ಭಾಗವಾಗಿ ಸಿಗುವ ಹಲವಾರು ಮಹಿಳೆಯರು ನನ್ನನ್ನು ಉಳಿಸಿದ್ದಾರೆ, ಸಧ್ಯ ! ಎನಿಸಿತು..

ರಶೀದರ  ಕತೆಗಳು …ಈ ಬದುಕಿನಂತೆ ಇದೆ,  ಸೊಗಸಾಗಿ, ಘನವಾಗಿ!

ಕರೀಮ್ ಭಾಯಿಗೊಂದು ಪತ್ರ

•November 22, 2010 • 5 Comments

ಕರೀಮ್ ಭಾಯಿ ಅವರೆ,

ನಿಮಗೆ ನಾನು ಪರಿಚಯವಿಲ್ಲ, ಆದರೆ ನಿಮ್ಮ ಬಗ್ಗೆ ನನಗೆ ಗೊತ್ತು. ನಾನು ನಿಮ್ಮನ್ನು ಭೇಟಿಯಾಗಿಲ್ಲ. ಎಂದೂ ಭೇಟಿಯಾಗುವುದಿಲ್ಲ, ನೀವು ಆಗಲೆ ಹೋರಟು ಹೋದಿರಿ.  ನೀವು ಕಾರು ಓಡಿಸಲು ಕಲಿಸಿಕೊಟ್ಟ ನನ್ನ ಅಕ್ಕ ಇಂದು ನಿಮ್ಮ ಬಗ್ಗೆ ನೂರಾರು ಬಾರಿ ನೆನಪಿಸಿಕೊಳ್ಳುತ್ತ ಇರುವಾಗಲೆ ನಿಮ್ಮ ಬಗ್ಗೆ ನನ್ನೊಳಗೆ ಒಂದು ಚಿತ್ರ ಬಂದುಬಿಟ್ಟಿದೆ, ನಾನೇ ನಿಮ್ಮ ಹತ್ತಿರ ಬಂದು ಕಲಿತ ಹಾಗೆ!  ಕಾರು ಒಡಿಸುವುದು ಕಲಿಯುವುದೇನು ಮಹಾ ಎನ್ನುತ್ತೀರ? ಇಲ್ಲ ಸರ್ , ನಮ್ಮಂತಹ ಹೆಣ್ಣು ಮಕ್ಕಳಿಗೆ ಕಾರಲ್ಲಿ ಕೂರುವುದೂ ತಿಳಿದಿರಲಿಲ್ಲ, ಕಾರ್ ನ ಡೋರ್ ಹೇಗೆ ಹಾಕಬೇಕೆಂದೂ ಗೊತ್ತಿರಲಿಲ್ಲ. ಗಂಡು ಮಕ್ಕಳು ಹೇಗೊ ಆಟವಾಡುತ್ತಲೆ ಸೈಕಲ್ ಕಲೀತಾರೆ. ಆದ್ರೆ ನಮ್ಮ ಮನೆಯಲ್ಲಿ ಸೈಕಲ್ಲೂ ಕಲಿಯಲು ಆಗಲಿಲ್ಲ ನಮಗೆ.

ಈಗಲೂ ಒಂದು ನಾಟಕ ನೋಡಲು ಹೋಗ ಬೇಕು, ಮಗುವನ್ನು ಕ್ಲಾಸಿನಿಂದ ಕರೆದುಕೊಂಡು ಬರಬೇಕು, ಅಪ್ಪನನ್ನು ಮಳೆಗಾಲದಲ್ಲಿ ಡಾಕ್ಟರ್ ಬಳಿ ಕರೆದುಕೊಂಡು ಹೋಗಬೇಕೆಂದರೆ ನಾವು ಮಾಡಬೇಕಾದ ಕೆಲಸ ಹಲವು, ಇಲ್ಲ ಕಿಸೆಯಲ್ಲಿ ದುಡ್ಡು ತುಂಬಿರಬೇಕು. ಆಟೋ ಹತ್ತಕ್ಕೆ. ಇಲ್ಲವೆ ಕಾರು ಇರುವ, ವಾಹನ ಇರುವ ಗಂಡಸಿನ ಹತ್ತಿರ ಗಿಂಜಬೇಕು, ಅವರ ಟೈಮಿಗೆ ಎಲ್ಲವನ್ನು ಸರಿ ಮಾಡಿಕೊಂಡು,  ರೇಗಿದರೆ ರೇಗಿಸಿಕೊಂಡು, ಕಾಯಿಸಿದರೆ ಭೀಷ್ಮನ ಹಾಗೆ ಕಾದು …ಹೀಗೆ.

ಕರೀಮ್ ಭಾಯ್ ನೀವು ತಿಂಗಳಿಗೆ ೧೦೦ ಹುಡುಗಿಯರಿಗೆ ಕಾರು ಒಡಿಸಲು ಕಲಿಸುತ್ತಿದ್ರಂತೆ! ನಿಮ್ಮನ್ನು ಎಷ್ಟು ಜನ ಹೆಣ್ಣು ಮಕ್ಕಳು ನೆನಪಿಸಿಕೊಳ್ಳುತ್ತಿರಬಹುದು? ಕಲಿಯುವಾಗ ನೀವು ಬಹಳ   ಶಿಸ್ತಿನಿಂದ, ಶ್ರದ್ದೆಯಿಂದ ಹೇಳಿಕೊಡ್ತಿದ್ದದು ನನ್ನ ಅಕ್ಕ ಹೇಳಿದ್ದಾಳೆ. ನಿಮ್ಮ ಪಾಠದ ಸವಿ ನನಗೆ ಸಿಗಲಿಲ್ಲ!

ಕಾರು ಓಡಿಸದರೆ ಮಾತ್ರ ಬದುಕು, ಅದೇ ಸ್ವರ್ಗ ಸುಖ ಅಂತ ನಾನು ನಮ್ಮಪ್ಪರಾಣೆ ನಂಬಿಲ್ಲ, ಆದರೆ ಹುಡುಗಿಯಾಗಿ ನನ್ನ ಪಾಡಿಗೆ ನಾನು ನನ್ನ ದಿನ ನಿತ್ಯದ ಕೆಲಸವನ್ನು ಮಾಡಿಕೊಂಡು ಹೋಗಲು ಸಾಧ್ಯವಾಗಿಸುವ ಈ ತರಹದ ಸ್ಕಿಲ್  ಎಷ್ಟು ಮುಖ್ಯ, ದೊಡ್ಡದು. ವಿಮೋಚನೆ ಎಂಬುದು ಎಲ್ಲೊ ಇಲ್ಲ ಸರ್, ದಿನ ನಿತ್ಯದ ಬದುಕಿನ ತೀರಾ ಸಣ್ಣ ಡೀಟೇಲ್ ಅಲ್ಲೆ ಎಲ್ಲಾ ಹುದುಗಿದೆ…

ನೀವು ಈಗ ಎಲ್ಲಿದ್ದೀರೊ ಅಲ್ಲಿಗೆ ನನ್ನ ಥ್ಯಾಂಕ್ಸ್  ಕಳುಹಿಸುತ್ತಿದ್ದೇನೆ, ಎಲ್ಲರ ಪರವಾಗಿ!

ಉಷಾ

ಮಂಗ ಮಾಯ!!

•October 14, 2010 • 1 Comment

ಎಲ್ಲ ಕೆಲಸ ಮುಗಿಸಿ

ಹೆಪ್ಪು, ಪಾತ್ರೆ, ದೀಪ, ನೀರಿನ ಬಾಟಲಿ

ಎಲ್ಲವನ್ನು ಲೆಕ್ಕ ಹಾಕಿ

ಕೈಗಳಿಗೆ  ತಡಕಾಡುವ

ಪುಟ್ಟು ಕೈಗಳನ್ನು

ನೇವರಿಸಿ

ಕಾಲು ಚಾಚಿ

ಕೈಗೊಂದು ಪೆನ್ನು ಇಟ್ಟುಕೊಂಡಾಗಲೆ

ನನ್ನ ಕವಿತೆ ಮಂಗ ಮಾಯ!

ಮಾಲತಶ್ರೀ ಮೈಸೂರು: ಒಂದು ರಂಗ ಪಯಣ, ಭಾಗ ೧

•September 27, 2010 • Leave a Comment

(ಇದು ನಾನು ವಿಕ್ರಾಂತ ಕರ್ನಾಟಕ ಹಾಗೂ ಗೆಳತಿ ಪತ್ರಿಕೆಗೆ ಮಾಡುತ್ತಿದ್ದ ರಂಗ ಕಲಾವಿದೆಯರೊಡನೆ ನಡೆಸಿದ ಸಂಭಾಷಣೆಯ ಭಾಗ. ಮಾಲತಶ್ರೀ ಮೈಸೂರು ನನಗೆ ಬಹಳ ಹಿಡಿಸಿದ ಕಲಾವಿದೆ. ಅವರನ್ನು ಭೇಟಿಯಾದ ನೆನಪು ಸದಾ ನನ್ನೊಳಗೆ ಇರುತ್ತದೆ)


ಮಾಲತಶ್ರೀ ಮೈಸೂರು ೧೯೭೦ ದಶಕದಲ್ಲಿ ಕರ್ನಟಕದ  ವೃತ್ತಿ ರಂಭೂಮಿಯಲ್ಲಿ ಮೂಡಿಬಂದ ಪ್ರಮುಖ ಹೆಸರು. ಆ ಸಮಯದ ಸಾಮಾಜಿಕ ನಾಟಕಗಳಲ್ಲಿ ಅಪಾರ ಜನಪ್ರೀಯತೆ ಕಂಡವರು. ೧೯೭೪ನಲ್ಲಿ ಚಿಕ್ಕಸೊಸೆ ನಾಟಕದಲ್ಲಿ ಎಲ್ಲರ ಗಮನ ಸೆಳೆದ ಮಾಲತಶ್ರೀ ಈವರೆಗೂ ತಮ್ಮ ರಂಗ ಪಯಣವನ್ನು ಎಡಬಿಡದೆ ಮುಂದುವರಿಸಿಕೊಂಡು ಬಂದ್ದಿದ್ದಾರೆ. ಆಂದು ಅವರು ನಟಿಸಿದ ಸಾಮ್ಮಾಜಿಕ ನಾಟಕಗಳು ಕರ್ನಾಟಕದ ನಾನಾ ಭಾಗಗಳಲ್ಲಿ ಸುತ್ತುತ್ತಾ,  ೩೦೦ -೪೦೦ ಶೋಗಳನ್ನು ಮಾಡಿದ್ದೂ ಇದೆ. ಮಾಲತಶ್ರೀ ಮೈಸೂರು ಹೆಸರು ಅಂದಿನ ಮನೆಮಾತಗಿತ್ತು. ಅಗಾಗಲೆ ಸಿನಿಮಾ ಎಲ್ಲೆಡೆ ಜನಪ್ರೀಯವಾಗಿದ್ದರೂ,  ವೃತ್ತಿ ರಂಭೂಮಿಯ ನಾಟಕಗಳಗೆ ಒಳ್ಳೆಯ ಪ್ರತಿಕ್ರಿಯೆ ದೊರೆಯುತ್ತಿತ್ತು. ಮಾಲತಶ್ರೀ ಅವರ ಖಾನಾವಳಿ ಚೆನ್ನಿ, ಭೂಮಿತೂಕದ ಹೆಣ್ಣು, ಗರೀಬಿ ಹಟಾವೋ, ಬಡವರೂ ನಗಬೇಕು, ಬಸ್ ಕಂಡಟ್ಕರ್ ಪಾತ್ರಗಳು ಸೂಪರ್ ಹಿಟ್ ಆಗಿದ್ದವು.

ಅವರ ರಂಗ ಯಾತ್ರೆ, ಅದರೊಡನೆ ಬೆಸೆದುಕೊಂಡ ಅವರ ಜೀವನದ  ಹೋರಾಟಗಳು ಅವರ ಜೀವನ ಕತೆಯಷ್ಟೇ ಅಲ್ಲದೆ ರಂಭೂಮಿಯ ಅನೇಕ ಮಹಿಳೆಯರ ಅನುಭವವನ್ನು ಬಿಂಬಿಸುತ್ತದೆ. ಅಂದಿನ ಹಿರಿಯ ನಟರಾದ ಅಂಬುಜಮ್ಮ, ನಾಗರತ್ನಮ್ಮ, ಆಬ್ಬಾಸ್ ಅಲಿ, ಹಿರಣಯ್ಯ ಮುಂತಾದವರೊಡನೆ ಕೆಲಸ ಮಾಡಿರುವ ಮಾಲತಶ್ರೀಯವರು ತಮ್ಮ  ಜೀವನದ ನೋವು ನಲಿವುಗಳ ಬಗ್ಗೆ ನಾನು ನಡೆಸಿದ ಸಂಭಾಷಣೆಯ ಆಯ್ದ ಭಾಗಗಳು:

ಪ್ರ: ನಿಮ್ಮ ಆತ್ಮ ಕಥೆ ’ತರೆ ಸರಿದಾಗ’ ಓದಿದೆ. ನಿಮ್ಮ  ಜೀವನದ ಅನಭವಗಳು ಅದರಲ್ಲಿ ಬಹಳ ಚೆನ್ನಾಗಿ ಮೂಡಿ ಬಂದಿದೆ. ಕಂಪನಿ ನಾಟಕಗಳ ಪರಿಚಯ ಜನರಿಗೆ ಇರಬಹುದು, ಆದರೆ ಒಂದು ಕಲಾವಿದೆಯಾಗಿ, ಮಹಿಳೆಯಾಗಿ ವೃತ್ತಿ ರಂಭೂಮಿಯ ನಿಮ್ಮ ಅನುಭವ ವಿಶಿಷ್ಟವಾದುದು. ಒಂದು ರೀತಿ ನಿಮ್ಮ ಕತೆ ಇನ್ನೂ ಅನೇಕರ ಕತೆಯೂ ಹೌದಲ್ಲವೆ?

ಮಾ: ಹೌದು, ತುಂಬ ಜನ ಇದ್ದಾರೆ, ಕಂಪಿನಿಗಳಲ್ಲಿ ಹಲವಾರೂ ವರಷಗಳು ದುಡಿದವರು ಇಂದು ಬಹಳ ಕಷ್ಟದಲ್ಲಿ ಇದ್ದಾರೆ. ಕಂಪನಿಗಳು ಮುಚ್ಚಿದ ಮೇಲೆ, ಅವರವರ ಮನೆ ಸೇರಿಕೊಂಡು, ಯಾವುದೇ ನೆರವಿಲ್ಲದೆ ಬಹಳ ಕಷ್ಟ ಪಡುತ್ತಿದ್ದಾರೆ. ಒಂದು ಕಲಾವಿದೆಯಾಗಿ ದಿನವೆಲ್ಲಾ ಎಷ್ಟೇ ಕಷ್ಟ ಪಟ್ಟರು ರಾತ್ರಿ ಶೋನಲ್ಲಿ ಸರಿಯಾಗಿ ಡೈಲಾಗ್ ಹೇಳಿದಾಗ ಎಲ್ಲರೂ ಚಪ್ಪಾಳೆ ಹೋಡಿತಾರಲ್ಲ, ಆಗ ಎಲ್ಲಾ ಕಷ್ಟ ಮರೆತುಹೋಗತ್ತೆ.

ಪ್ರ: ಗೋಕಾಕ್ ನ ಶಾರದ ಕಂಪನಿಯಲ್ಲಿ ನೀವು  ರಂಭೂಮಿಯನ್ನು ಪ್ರವೇಶಿಸಿದಿರಿ, ಅಂದಿನ ವಾರತಾವರಣ ಕಂಪನಿಯಲ್ಲಿ ಹೇಗಿತ್ತು?

ಮಾ:  ತುಂಬಾ ಚೆನ್ನಾಗಿತ್ತು. ಆಗೆಲ್ಲ ಗುರುಗಳ  ಮಾರ್ಗದರಶವಿಲ್ಲದೆ ಸ್ಟೇಜ್ ಹತ್ತಲು ಬಿಡುತ್ತಿರಲಿಲ್ಲ. ಈಗೆಲ್ಲ ಮಾತು ಕಲಿತು ಒಪ್ಪಿಸಿದರೆ ಸಾಕು. ಆದ್ರೆ ಆಗ ಒಂದು ಸಣ್ಣ ವ್ಯತ್ಯಾಸ ಆದ್ರೂ ನಮ್ಮನ್ನ ಸ್ಟೇಜ್ ಮೇಲೆ ಬಿಡುತ್ತಿರಲಿಲ್ಲ.  ಒಂದು ಸೀನ್ ನಲ್ಲಿ ಒಂದು ಸಣ್ಣ ತಪ್ಪಾದ್ರೂ ಗುರುತಿಸಿ ತಿಳಿಸ್ತಿದ್ರು.  ಮೈಸೂರಿನಿಂದ ಬಂದ ನನ್ನ ಉಚ್ಚರಣೆ ಸ್ವಲ್ಪ ಭಿನ್ನವಾಗಿತ್ತು, ಅದನ್ನು ತಿದ್ದಿಕೊಳ್ಳುವರೆಗೂ ನನ್ನನು ಸ್ಟೇಜ್ ಮೇಲೆ ಬಿಡಲಿಲ್ಲ. ನಾನೂ ಬೇಗ ಕಲಿತುಕೊಂಡೆ. ಪ್ರೋತ್ಸಾಹ ಬಹಳವಿತ್ತು, ಪ್ರೀತಿಯೂ ಇತ್ತು. ಬಸವಣ್ಣನೊಪ್ಪೊರು ಅಂತ ಇದ್ರು, ಅವರೇ ನನ್ನ ಗುರುಗಳು, ಅವರೇ ನನಗೆ ಬಣ್ಣ ಹಚ್ಚಿದ್ರು.

ಅವರು ನನಗೆ  ’ಅವರು ಬಹಳ ಚೆನ್ನಾಗಿ ಮಾಡ್ತಿದ್ರು’ ಅಂತ ಯಾರೊ ಬಗ್ಗ ಹೇಳಿದ್ರೆ ನನಗೆ ಆಗ ತುಂಬಾ ಸಿಟ್ಟು ಬರ್ತಿತ್ತು. ’ಅವರು ಚೆನ್ನಾಗಿ ಮಾಡ್ತಿದ್ರು ಅಂತ ಹೇಳುವ ಬದಲು, ಅವರು ಹೀಗೆ ಮಾಡ್ತಿದ್ರು , ನೀನು ಹೀಗೆ ಮಾಡು ಅಂತ ಹೇಳಿ, ಒಂದು ರುಪಾಯಲ್ಲಿ ನಾಕಾಣಿಷ್ಟು ಆದ್ರೂ ಅದನ್ನು ಮಾಡ್ತಿನಿ’ ಅಂತ ನಾನು ಹೇಳ್ತಿದ್ದೆ. ಕಲಾವಿದೆ ಆಗಬೇಕೆಂಬ ಹುಚ್ಚು ನನಗೆ ಆಗ ಬಹಳವಿತ್ತು.  ಅವರು ಯಾವ ಡೈಲಾಗ್ ಗೆ ಚಪ್ಪಾಳೆ ತೊಗೊತಿದ್ರೋ ಅದೇ ಡೈಲಾಗ್ ಗೆ ನಾನು ಚಪ್ಪಾಳೆ ತೊಗೊಬೇಕಂತ ನನಗೆ ಬಹಳ ಆಸೆ.  ಅಷ್ಟು ಪ್ರಯತ್ನ ನಾನು ಮಾಡ್ತಿದ್ದೆ. ಒಂದು ಹೊಸ ನಾಟಕ ಅಂದ್ರೆ ಅದರೆ ಬಗ್ಗೇನೆ ಯೋಚ್ನೆ, ಹೇಗೆ ಡೈಲಾಗ್ ಹೇಳ ಬೇಕು, ಹೇಗೆ ನಿಂತ್ಕೋಬೇಕು, ಯಾವ ಮೇಕಪ್ ಸರಿ ಹೊಂದತ್ತೆ …ರಾತ್ರಿ ನಿದ್ದೆ ಸಹ ಮಾಡ್ತಿರಲಿಲ್ಲ. ಅದರಲ್ಲೆ ಮುಳುಗಿಹೋಗ್ತಿದ್ದೆ. ಮೊದಲನೆ ನಾಟದಲ್ಲಿ ಸಾದ್ವಿ ಪಾರ್ಟ್ ಮಾಡಿದ್ದು, ಮತ್ತೆ ಹೊಸ ನಾಟಕದಲ್ಲಿ ಸಾದ್ವಿ ಪಾರ್ಟ್ ಕೊಟ್ರೆ ಅದನ್ನು ಹೇಗೆ ಭಿನ್ನವಾಗಿ ಮಾಡಬೇಕಂತ ನಾನೆ ಯೊಚ್ನೆ ಮಾಡ್ತಿದ್ದೆ. ಪಾರ್ಟ್ ಮಾಡಿದ ಮೇಲೆ ಗೇಟಿನಲ್ಲಿ ಟಿಕೆಟ್ ತೆಗೆದುಕೊಳ್ಳುವ ಹುಡುಗನನ್ನು ’ಇವತ್ತು ನನ್ನ ಪಾತ್ರ ಹೇಗಿತ್ತು?’ ಅಂತ ಕೇಳಿಕೊಳ್ತಿದ್ದೆ. ಒಮ್ಮೊಮ್ಮೆ ನಾನೆ ನಾಟಕ ಮುಗಿದ  ತಕ್ಷಣ ಡ್ರೆಸ್ ಬದಲಾಯಿಸಿ, ಜನ ಮದ್ಯೆ ದೂರಿ ಅವರು ಮಾತಾಡೋದನ್ನು ಕೇಳಿಕೊಳ್ತಿದ್ದೆ. ಒಂದು ಪಾತ್ರ ಅಂದ್ರೆ ನನಗೆ ಅಷ್ಟು ಹುಚ್ಚಿತ್ತು.

ಸಣ್ಣವಳಿದ್ದಾಗ  ಪೌರ್ರಾಣಿಕ ನಾಟಕಗಳನ್ನ ಮಾಡಿದ್ದೇನೆ. ಸ್ತ್ರೀನಾಟಕ ಮಂಡಲಿಯಲ್ಲಿ ೮ ವರ್ಷದವಳಾಗಿದ್ದಾಗ  ಮಕರಂದ, ಸಹದೇವನ ಪಾತ್ರ ಮಾಡ್ತಿದ್ದೆ. ಆಗ ನಾಗರತ್ನಮ್ಮ ನವರ ಕಂಸನ ಪಾತ್ರ ನೋಡ್ತಿದ್ದೆ, ಅವರು ಅದ್ಭುತವಾಗಿ ಪಾತ್ರ ಮಾಡ್ತಿದ್ರು.

ಪ್ರ: ಅಂಬುಜಮ್ಮನವರೋಡನೆ ನೀವು ಕೆಲಸ ಮಾಡಿದ್ದೀರ..

ಮಾ: ಹೌದು. ಅಂಬುಜಮ್ಮನವರು ಪಾತ್ರ ಮಾಡುವಾಗ ನಾನು ನಿಂತು ಅವರನ್ನೇ ನೋಡ್ತಿದ್ದೆ.  ಅವರ ಹತ್ರ ಹೋಗಿ ಇದನ್ನು ಹೇಗೆ ಮಾಡಬೇಕು ಅಂತ ಕೇಳಿಕೊಳ್ಳುತ್ತಿದ್ದೆ. ಅವರು ನನಗೆ ತಲೆ ಬಾಚಿ, ಮೇಕಪ್ ಮಾಡ್ರಿದ್ರು, ಬಹಳ ಪ್ರೀತಿಯಿಂದ ನಮ್ಮನ್ನ ನೋಡ್ತಿದ್ರು.  ಆಗ ಅದೇ ಕಂಪನಿಯಲ್ಲಿ ನಾಗರತ್ನಮ್ಮ ಅಂತಾ ಇದ್ರು, ಅವರು ಇನ್ನೂ ಇದ್ದಾರೆ, ಆದರೆ ಅಂಬುಜಮ್ಮ ಈಗಿಲ್ಲ. ಸ್ತ್ರೀ ನಾಟಕ ಮಂಡಲಿಯಲ್ಲಿ  ಮಹಿಳೆಯರು ಮಾತ್ರ, ಹೀಗಾಗಿ ಜನ ತಮ್ಮ ಹೆಣ್ಣು ಮಕ್ಕಳನ್ನಾ ಅಲ್ಲಿ ನಾಟಕಕ್ಕೆ ಸುಲಭವಾಗಿ ಬಿಡುತಿದ್ರು. ಮಹಿಳೆಯರೆ ಪುರಷರ ಪಾತ್ರ ಮಾದ್ತಾರೆ ಅಂತ ಜನ ನಾಟಕ ನೊಡೋಕೆ ಬಹಳ ಸೇರುತ್ತಿದ್ದರು. ನಾಗರತ್ನಮ್ಮ ನವರ ಕಂಸ, ರಾವಣ, ಭೀಮನ ಪಾತ್ರ ಬಹಳ ಚೆನ್ನಾಗಿ ಇರುತ್ತಿತ್ತು.

ನಾವೆಲ್ಲ ಒಂದೇ ಮನೆಯಲ್ಲಿ ಒಟ್ಟಿಗೆ ಇರುತ್ತಿದ್ದೆವು. ಒಂದು ರೂಮಿನಲ್ಲಿ ನಟಿಯರೆಲ್ಲ ಉದ್ದಾಕ್ಕೆ, ಸಾಲಾಗಿ ಮಲಗುತ್ತಿದ್ದೆವು. ಒಂದು ಟ್ರಂಕು, ಹಾಸಿಗೆ ಇಟ್ಟಿಕೊಳ್ಳುಷ್ಟು ಒಬ್ಬರಿಗೆ ಜಾಗ ಇರುತ್ತಿತ್ತು. ನಮ್ಮನ್ನ ಒಬ್ಬೊಂಟಿಯಾಗಿ ಎಲ್ಲೂ ಕಳಿಸುತ್ತಿರಲಿಲ್ಲ. ಒಂದು ಸಿನಿಮಾಗೆ ಹೋಗಬೇಕೆಂದ್ರೂ ಒಂದು ಗಾಡಿ ಮಾಡಿ ಎಲ್ಲರನ್ನೂ ಕಳುಹಿಸುತ್ತಿದ್ದರು. ಬೆಳಗಿನ ಬೆಳಕಲ್ಲಿ ನಮ್ಮನ್ನ ಜನ ನೋಡಿದರೆ ರಾತ್ರಿ ಹೊತ್ತು ನಮ್ಮನ್ನ ನೋಡಲು ನಾಟಕಕ್ಕೆ ಬರಲು ಅವರಿಗೆ ಆಸಕ್ತಿ ಕಡಿಮೆಯಾಗುತ್ತೆ ಅಂತಾನೊ ಏನೋ ನಮ್ಮನ್ನು ಬೆಳಗ್ಗೆ ಹೊರಗೆ ಹೆಚ್ಚು ಬಿಡ್ತಿರಲಿಲ್ಲ.